vrkms-featured1

ಜನರ ಮನದಲ್ಲಿ ಪುರುಶೋತ್ತಮನೆಂದು ದೇವರ ಪ್ರತಿರೂಪವೆಂದು ಶ್ರದ್ಧಾಭಕ್ತಿಯಿಂದ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ಪ್ರಸಿದ್ಧ ರಾಮನ ಕುಲದವರೇ ರಾಮಕ್ಷತ್ರಿಯರು ಎಂಬ ಮಾತಿದೆ. ಗೋವಾ ರಾಜ್ಯದಿಂದ ವಲಸೆ ಬಂದವರು, ವಿಜಯನಗರ ಸಾಮ್ರಾಜ್ಯದಲ್ಲಿ ಕ್ಷತ್ರಿಯರಾಗಿ ಸೇವೆ ಸಲ್ಲಿಸಿದವರು ಎಂಬೆಲ್ಲಾ ಅಂಶಗಳು ರಾಮಕ್ಷತ್ರಿಯರ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ರಾಮಕ್ಷತ್ರಿಯ ಸಮುದಾಯವು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊಂದಿದೆ.

ಭಾರತೀಯರಲ್ಲಿ ಸಾವಿರಾರು ಜಾತಿ ಉಪಜಾತಿಗಳಿವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರವತ್ತು ಕೋಟಿ ಕ್ಷತ್ರಿಯರೇ ಇಂದಿಗೂ ಇದ್ದಾರೆ. ಕ್ಷತ್ರಿಯರಲ್ಲಿ ಸರಿಸುಮಾರು ಇಪ್ಪತ್ತೇಳು ಉಪಜಾತಿಗಳಿವೆ. ಇದರಲ್ಲಿ ಕರ್ನಾಟಕದಲ್ಲಿಯ ರಾಮಕ್ಷತ್ರಿಯ ಸಮುದಾಯದವರು ಒಂದೂವರೆ ಲಕ್ಷಕ್ಕಿಂತ ಹೆಚ್ಚಿನವರು ಇರುವುದು ತಿಳಿದುಬರುತ್ತದೆ.

ಪ್ರಾಚೀನ ಕನ್ನಡ ನಾಡಿನ ನಿರ್ದಿಷ್ಟವಾದ ಜನಾಂಗದಲ್ಲಿ ರಾಮಕ್ಷತ್ರಿಯ ಸಮುದಾಯವು ಒಂದು. ರಾಮಕ್ಷತ್ರಿಯರ ರೂಪ, ಉಡುಪು, ಧೈರ್ಯ, ಸಾಹಸ, ಕುಲನಾಮ, ಆಚರಣೆ, ದೇವರು, ಧರ್ಮ ಈ ಮುಂತಾದ ವಿಷಯಗಳ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿ ತಮ್ಮದೇ ಆ ಪ್ರಾಕಲ್ಪನೆಗಳನ್ನು ಇತಿಹಾಸಕಾರರು, ಹಿರಿಯರು ದಾಖಲಿಸಿದ್ದಾರೆ.

‘ರಾಮಕ್ಷತ್ರಿಯ’ ಇದೊಂದು ಸಂಯುಕ್ತ ಪದ, ಸಮಾಸ ಪದವು ಹೌದು. ರಾಮನಂತೆ ಗುಣ ನಡತೆ, ಧೈರ್ಯ ಸಾಹಸವನ್ನು ಹೊಂದಿರುವ ವ್ಯಕ್ತಿ ಯಾವನೋ ಅವನು ರಾಮಕ್ಷತ್ರಿಯ. ಇದು ಸಮುದಾಯನ್ನು ಸೂಚಿಸುವ ಪದ. ಇದನ್ನು ಕುಲನಾಮವೆಂದು ಕರೆಯಬಹುದು. ಇಲ್ಲಿ ಕ್ಷತ್ರಿಯ ಎಂದರೆ ಧೈರ್ಯ ಸಾಹಸದ ವೃತ್ತಿ ಎಂಬ ಅರ್ಥ ನೀಡುತ್ತದೆ. ದುಷ್ಟರಿಂದ ಸಂರಕ್ಷಣೆಯನ್ನು ನೀಡುವವನೇ ಕ್ಷತ್ರಿಯ ಎಂಬ ಉಲ್ಲೇಖ ಪುರಾಣದಲ್ಲಿದೆ. ಜನರ ಮನದಲ್ಲಿ ಪುರುಶೋತ್ತಮನೆಂದು ದೇವರ ಪ್ರತಿರೂಪವೆಂದು ಶ್ರದ್ಧಾಭಕ್ತಿಯಿಂದ ಮೂರ್ತಿರೂಪದಲ್ಲಿ ಪೂಜಿಸಲ್ಪಡುವ ಪ್ರಸಿದ್ಧ ರಾಮನ ಕುಲದವರೇ ರಾಮಕ್ಷತ್ರಿಯರು ಎಂಬ ಮಾತಿದೆ.

ಸದ್ಗುಣ ಸಂಪನ್ನ, ಪಿತೃವಾಕ್ಯ ಪರಿಪಾಲಕ ಶ್ರೀರಾಮನು ಸೂರ್ಯವಂಶ ಕ್ಷತ್ರಿಯ. ಅವನ ಹುಟ್ಟು ಅಯೋಧ್ಯೆಯಾಗಿರುವುದರಿಂದ ರಾಮಕ್ಷತ್ರಿಯರ ಮೂಲ ಉತ್ತರ ಭಾರತವೇ ಆಗಿರುತ್ತದೆ. ರಾಮನು ಆರ್ಯ ಜನಾಂಗದವನು. ರಾಮಕ್ಷತ್ರಿಯರೂ ಸಹ ಉತ್ತರದಿಂದ ವಲಸೆ ಬಂದ ಆರ್ಯ ಜನಾಂಗದವರು. ಅವರ ದೃಢಕಾಯ, ಎತ್ತರದ ನಿಲುವು, ಮೈಬಣ್ಣ ಆರ್ಯ ಮೂಲದ ಸಿದ್ಧಾಂತವನ್ನು ಪ್ರತಿಪಾದಿಸುವವರ ಅಭಿಪ್ರಾಯವಾಗಿದೆ.

ರಾಜರೆಲ್ಲರೂ ಕ್ಷತ್ರಿಯರೇ. ಆದರೆ ಕ್ಷತ್ರಿಯರಲ್ಲಿ ಹಲವು ಪಂಗಡಗಳಾಗಿ ಒಡೆದು ಚದುರಿಹೋಗಿದೆ. ಜನಪದರಲ್ಲಿ ಬಾಯಿಯಿಂದ ಬಾಯಿಗೆ ಬಂದು ಇನ್ನೂ ಜೀವಂತ ಇರುವ ಚಂದ್ರಗುಪ್ತ ಮೌರ್ಯ ಸೂರ್ಯವಂಶ ಕ್ಷತ್ರಿಯರ ಪ್ರಥಮ ಸಾಮ್ರಾಟ ಎನ್ನುತ್ತಾರೆ. ಇವನ್ನೆಲ್ಲಾ ಗಮನಿಸಿದಾಗ ರಾಮಕ್ಷತ್ರಿಯರ ಮೂಲ ಉತ್ತರ ಭಾರತ ಎಂದು ಸಾಬೀತುಪಡಿಸುತ್ತದೆ. ಸೂರ್ಯನನ್ನು ರಾಮಕ್ಷತ್ರಿಯರು ನಿತ್ಯ ಭಯ ಭಕ್ತಿಯಿಂದ ಕೈಮುಗಿಯುವ ಕ್ರಿಯೆ ಇದನ್ನು ದೃಢಪಡಿಸುತ್ತದೆ. ಸಿಂಧೂನದಿ ಹಾಗೂ ಸರಸ್ವದಿ ನದಿ ಮುಖಜಭೂಮಿಯಲ್ಲಿ ನೆಲೆಸಿಂತಿದ್ದ ಆರ್ಯರು ಮುಂದೆ ಬೇರೆ ಬೇರೆ ಕಾರಣಗಳಿಂದಾಗಿ ಭಾರತದ ಇತರ ಭಾಗಕ್ಕೆ ವಲಸೆ ಹೋದಂತೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ.

ಕೆ.ಎಲ್. ಶಿಲಾಹಾರ ಎಂಬುವವರು ತಮ್ಮ ‘ರಾಮಕ್ಷತ್ರಿಯರ ಮೂಲಶೋಧ ಮತ್ತು ಸಂಸ್ಕೃತಿ ಸಂಪ್ರದಾಯ’ ಎಂಬ ಪುಸ್ತಕದಲ್ಲಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ. 1. ರಾಮಕ್ಷತ್ರಿಯರು ಮೂಲತಃ ಕನ್ನಡ ನಾಡಿನವರಲ್ಲ. ಸರಸ್ವತಿ ನದಿ ತೀರದಿಂದ ವಲಸೆ ಬಂದ ಆರ್ಯ ಕುಲದವರು.  2. ರಾಮಕ್ಷತ್ರಿಯರಲ್ಲಿ ಹೆಚ್ಚಿನವರು ಚಂದ್ರವಶಿಯರು. 3. ರಾಮಕ್ಷತ್ರಿಯರು ಋಗ್ವೇದಗಳು, ಶಾಖಲ ಶಾಖೆಯವರು, ಅಶ್ವಲಾಯನ ಸೂತ್ರವನ್ನು ಅನುಸರಿಸುವವರು. 4. ರಾಮಕ್ಷತ್ರಿಯರು ಪಿತೃ ಪ್ರಧಾನವಾದ ಸಕುಟುಂಬ ಪದ್ಧತಿಯ ವೈದಿಕ ಸಂಪ್ರದಾಯದ ಆರ್ಯವಂಶದವರು. 5. ರಾಮಕ್ಷತ್ರಿಯರು ಗೋತ್ರ, ಪ್ರವರ ಮತ್ತು ಗುರುಮಠ ಉಳ್ಳವರು. 6. ರಾಮಕ್ಷತ್ರಿಯರು ಶಿವ ಮತ್ತು ಶಕ್ತಿಯೇ ಕುಲದವರು. 7. ಆದಿಯಲ್ಲಿ ರಾಮಕ್ಷತ್ರಿಯರ ಕುಲಪುರೋಹಿತರು ಸಾರಸ್ವತ (ಶಣವಿ) ಬ್ರಾಹ್ಮಣರಾಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.

ಬೆಕಲ್ ರಾಮನಾಯಕ ಅವರ ಸಾಹಿತ್ಯ ಸಂಪುಟದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ –  “ರಾಮಕ್ಷತ್ರಿಯರು ವಿಜಯನಗರ ಹಾಗೂ ಕೆಳದಿ ಅರಸರೊಂದಿಗೆ ಸೇರಿ ಕೋಟೆಯನನ್ನು, ಸಾಮ್ರಾಜ್ಯವನ್ನು ಕಟ್ಟಿರುವುದರಿಂದಲೇ ಕೋಟೆಗಾರ, ಶೇರುಗಾರ ಹಾಗೂ ನಾಯ್ಕ ಎಂಬ ಕುಲನಾಮ ಪಡೆದಿದ್ದಾರೆ ಎಂದು ನಿಶ್ಚಿತವಾಗಿ ಹೇಳಬಹುದು. ಹಿಂದಿನ ನಮ್ಮ ಹಿರಿಯರೆಲ್ಲಾ ಸೆರೆಗಾರ ಎಂಬ ಮೇಲ್ ಹೆಸರನ್ನು ಇಟ್ಟುಕೊಳ್ಳುತ್ತಿದ್ದರು.”

ಉತ್ತರ ಕನ್ನಡ ಜಿಲ್ಲೆಯ ಗೆಜೆಟೆರಿಯನ್’ನಲ್ಲಿ ಶೇರೆಗಾರ ಎನ್ನುವ ಕೊಂಕಣಿ ಭಾಷೆಯನ್ನಾಡುವ ವರ್ಗದ ವಿವರಣೆ ಇದೆ. ಸೆರೆಗಾರ ಎನ್ನುವ ಬಿರುದು ‘ಮೂಮಣೆ’ (ಖಡ್ಗ, ಮುಂಡಾಸು ಇಡಲು ಹಾಗೂ ಕುಳಿತುಕೊಳ್ಳಲು ಮೂರು ಮಣೆ ಕೊಡುವುದು) ಕೊಡುವ ಪದ್ಧತಿ ಲಾಗಾಯಿತ್ತಿನಿಂದಲೂ ಇದೆ. ಇದರಿಂದ ಈ ಹಿಂದೆ ರಾಮಕ್ಷತ್ರಿಯರಿಗೆ ನೀಡುತ್ತಿದ್ದ ಗೌರವವನ್ನು ತಿಳಿಯುತ್ತದೆ.

ದೇವರನ್ನು ಗುಡಿಗಳಲ್ಲಿ ಸ್ಥಾಪಿಸಿ ಪೂಜಿಸುವ ಪದ್ಧತಿ ದ್ರಾವಿಡರಿಂದ ಪ್ರಾರಂಭವಾಯಿತು. ಶಿವ, ದುರ್ಗೆ, ಗಣೇಶ, ಸ್ಕಂದ, ಹನಮಂತ, ನಂದಿ ವಿಷ್ಣು ಮೊದಲಾದ ದೇವತೆಗಳು ದ್ರಾವಿಡ ಮೂಲದವರು. ಇವರ ಗುಣಲಕ್ಷಣವನ್ನು ಹೊಂದಿರುವ ರಾಮಕ್ಷತ್ರಿಯರು ದ್ರಾವಿಡ ಮೂಲದವರು ಎಂದು ಪ್ರತಿಪಾದಿಸಲಾಗುತ್ತದೆ. ಹಾಗಾಗಿ ರಾಮಕ್ಷತ್ರಿಯರ ಮೂಲವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಕುಂದಾಪುರದ ಕೆ.ಆರ್. ಕೊತ್ವಾಲ್ ಅವರು ಹೇಳುವಂತೆ “ರಾಮಕ್ಷತ್ರಿಯರ ಕರ್ತವ್ಯ ದಕ್ಷತೆಯನ್ನು ಮೆಚ್ಚಿದ ವಿಜಯನಗರದ ಅರಸರು ವಿಜಯದುರ್ಗ ಮತ್ತು ಸಿಂದುದುರ್ಗಗಳ ದಕ್ಷಿಣ ಕರಾವಳಿಯ ದಂಡಯಾತ್ರೆಯಲ್ಲಿ ಪಾಲ್ಗೊಂಡು ಕರಾವಳಿಯ ಕೋಟೆಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದ್ದರು. ರಾಮಕ್ಷತ್ರಿಯ ಸೇನೆ ಕಂಕುವಳಿಯ ವಿಜಯದುರ್ಗದಿಂದ ಆರಂಬಿಸಿ ಸಿಂದುದುರ್ಗ, ಗೋವಾ, ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಉಳ್ಳಾಲ, ಕುಂಬಳೆ, ಕಾಸರಗೋಡು, ಬೇಕಲ್ ಕೋಟೆಗಳನ್ನು ವಶಪಡಿಸಿಕೊಂಡರು. ರಾಮಕ್ಷತ್ರಿಯನ್ನು ಆ ಕೋಟೆಗಳ ಸಂರಕ್ಷಕ ಸೇವಕರಾಗಿ ಅರಸರು ನೇಮಿಸಿದ್ದರು. ಕರಾವಳಿಯ ಎಲ್ಲಾ ಕೋಟೆಗಳ ರಕ್ಷಣೆಯ ಕಾರ್ಯವನ್ನು ರಾಮಕ್ಷತ್ರಿಯ ಸಮುದಾಯದವರು ನಿರ್ವಹಿಸುತ್ತಿದ್ದರು. ಹಾಗಾಗಿ ಈ ಸಮುದಾಯದವರನ್ನು ಕೋಟೆಗಾರರೆಂದೂ ಕರೆಯುತ್ತಿದ್ದರು”

ಐತಿಹಾಸಿಕವಾಗಿ ಲಭ್ಯವಿರುವ ಶೃಂಗೇರಿ ಪೀಠಕ್ಕೆ ನೀಡಿದ ತಾಮ್ರಪತ್ರದ ಭಿನ್ನ್ವತ್ತಲೆ, ಸೋಮದಾ ಸ್ವರ್ಣವಲ್ಲಿ ಮಠಕ್ಕೆ 1843ರಲ್ಲಿ ಮಿರ್ಜಾನಿನ ದೇವನಾಯಕನ ಮಗ ದವಳನಾಯಕನು ಬರೆದುಕೊಟ್ಟ ಧರ್ಮಶಾಸನ 1745ರ ಕೆಳದಿ ಬಸಪ್ಪನಾಯಕನು ಕಟ್ಟಿಸಿದ ಕಲ್ಯಾಣಪುರದ ಮಹಾಲಿಂಗೇಶ್ವರ ದೇವಸ್ಥಾನದ ಸನ್ನದ್ದು ಹಾಗೂ ಚಾಲ್ತಿಯಲ್ಲಿರುವ ಜನಪದ ಗೀತೆಗಳು ರಾಮಕ್ಷತ್ರಿಯರ ಮೂಲದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಐತಿಹಾಸಿಕ ಹಿನ್ನೆಲೆಯ ಪ್ರಕಾರ ನಮ್ಮ ಪೂರ್ವಜರು ಗೋವಾದಲ್ಲಿ ನೆಲೆಸಿದ್ದರು. ಪೋರ್ಚುಗೀಸರ ದಬ್ಬಾಳಿಕೆ ಹಾಗೂ ಮತಾಂತರ ಚಳುವಳಿಗಳಿಂದ ಕಂಗೆಟ್ಟು ಕೆಲವರು ತಮ್ಮ ದೇವರನ್ನು ಹೊತ್ತುಕೊಂಡು ಬಂದರೆ ಇನ್ನು ಕೆಲವರು ದೇವರನ್ನು ಅಲ್ಲಿಯೇ ಬಿಟ್ಟು ಕಾರವಾರದಿಂದ ಬೇಕಲ್ ತನಕ ವಲಸೆ ಬಂದಿರುತ್ತಾರೆ. ದೇವರನ್ನು ಬಿಟ್ಟು ಬಂದವರ ಕುಲ ದೇವರು ಅಲ್ಲೆ ಇದ್ದರೆ ಉಳಿದವರದ್ದು ಗೋವೆಯಲ್ಲಿಯೇ ಇರುವುದು ಕಂಡುಬರುತ್ತದೆ. ಇವರಿಗೆ ಕೋಟೆಗಾರ, ರಾಮಕ್ಷತ್ರಿಯ, ಸೇರುಗಾರ, ನಾಯಕ, ನಾಯ್ಕ, ಕೊತವಾರ, ಹವಾಲ್ದಾರ, ಸೇರ್ವೆಗಾರ, ಶೇರುಗಾರ, ಹೋಬಳಿದಾರ, ರಾವ್, ಸಾಯಲ್ ಎಂಬ ಉಪನಾಮಗಳಿರುವುದು ಕಂಡುಬರುತ್ತದೆ.

ರಾಮಕ್ಷತ್ರಿಯ ಜನಾಂಗವರು 600 ವರ್ಷಗಲ ಹಿಂದೆ ಸುಮಾರು 15ನೇ ಶತಮಾನಗಳ್ಲಿ ಮಹಾರಾಷ್ಟ್ರದ ವಿಜಯದುರ್ಗದ ಮೂಲದಿಂದ ಬಂದು ಗೋವಾದಲ್ಲಿ ನೆಲೆನಿಂತು ಕನ್ನಡ ನಾಡಿಗೆ ವಲಸೆ ಬಂದವರು. ಗೋವಾ ಗೆಝೆಟಿಯರಲ್ಲಿ ಉಲ್ಲೇಖವಾದಂತೆ ಇವರು ಗೋವಾದ ಮೂಲ ನಿವಾಸಿಗಳು. ತಮ್ಮ ರಾಜರ ಕೋಟೆಯ ಕಾವಲುಗಾರರಾಗಿ ಮತ್ತು ಬೇಟೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ತಷ್ಟನ್ 1909-99ರಲ್ಲಿ ಅಭಿಪ್ರಾಯಪಟ್ಟಂತೆ ರಾಮಕ್ಷತ್ರಿಯ ಸಮುದಾಯದವರು ಕರ್ನಾಟಕದ ಕರಾವಳಿಯ ಪ್ರದೇಶಕ್ಕೆ ಬರಲು ಮುಖ್ಯವಾದ ಕಾರಣವೆಂದರೆ ಪೋರ್ಚುಗೀಸರು ಗೋವಾವನ್ನು ವಶಪಡಿಸಿಕೊಂಡಾಗ ಯಾರು ಅಲ್ಲಿಂದ ಪಲಾಯಾನವಾಗಲಿಲ್ಲವೋ ಅವರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಿಕ್ಕೆ ಮತಾಂತರಗೊಳಿಸುತ್ತಿದ್ದರು.

1934ರ ಟೈಮ್ಸ್ ಆಫರ್ ಇಂಡಿಯಾ ಪತ್ರಿಕೆಯಲ್ಲಿ ಉಲ್ಲೇಖವಾಗಿರುವಂತೆ ಕ್ರಿಸ್ತಪೂರ್ವ 2700ಕ್ಕೂ ಪೂರ್ವದಲ್ಲಿ ರತ್ನಗಿರಿ ಜಿಲ್ಲೆಯ ವಿಜಯದುರ್ಗದಲ್ಲಿ ಒಂದು ಪ್ರಸಿದ್ಧ ರಾಜ್ಯವಿದ್ದು ಅವರ ರಾಜ ಚಿಹ್ನೆ ತಿಮಿಂಗಲ. ಈ ವಂಶದ ಅರಸರಲ್ಲಿ ಓರ್ವ ರಾಜನು ಅಯೋಧ್ಯೆಯ ದಶರಥನಿಂದ ಕೊಲ್ಲಲ್ಪಟ್ಟನು. ವಿಜಯದುರ್ಗ ಒಂದು ಬಂದರಾಗಿದ್ದು ಮುಂಬೈಯಿಂದ 170 ಮೈಲು ದೂರವಿದ್ದು ಈಗಲು ಪ್ರಾಚೀನ ಕೋಟೆಯೊಂದು ಈ ಸ್ಥಳದಲ್ಲಿ ಇದೆ. ಬಿಜಾಪುರದ ಸುಲ್ತಾನ ಮತ್ತು ಛತ್ರಪತಿ ಶಿವಾಜಿ ಅವರ ಕಾಲದಲ್ಲಿ ಕೋಟೆ ಮತ್ತಷ್ಟು ದೃಢವಾಗಿ ವಿಸ್ತಾರವಾಯಿತು. ಈ ಪ್ರದೇಶದಲ್ಲಿ ರಾಮೇಶಱವರ ದೇವಾಲಯವಿದ್ದು ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ ಮೊದಲಾದ ಅರಸರುಗಳ ಆಳ್ವಿಕೆಗ ಒಳಪಟ್ಟಿತ್ತು. ಈ ಪ್ರದೇಶವನ್ನು ರಾಮಕ್ಷತ್ರಿಯ ಮೂಲ ನೆಲೆಯಿಂದು ಹೇಳಲಾಗುತ್ತದೆ.

ಕೆಳದಿ ರಾಜ್ಯಕ್ಕೆ ಕಾಲಿಟ್ಟ ನಂತರ ಇವರ ಚರಿತ್ರ ನಿಖರವಾಗಿ ನಮೂದಾಗಿದ್ದು, ಕ್ರಿ.ಶ1565ರ ವೆಂಕಟಪ್ಪ ನಾಯಕನ ಕಾಲಾವಧಿಯಲ್ಲಿ ಕರ್ನಾಟಕವನ್ನು ಪ್ರವೇಶಿಸಿದರು. ಈತನ ಕಾಲದಲ್ಲಿ ಇವರು ಕೆಳದಿ ಸೈನ್ಯವನ್ನು ಸೇರಿ ನಂತರ ವೀರಭದ್ರನಾಯಕ, ಶಿವಪ್ಪ ನಾಯಕನ ಕಾಲದಲ್ಲಿ ಕರಾವಳಿ ಭಾಗದ ಕೋಟೆಯ ಕಾವಲುಗಾರರರಾಗಿ, ದಂಡಾಧಿಕಾರಿಯಾಗಿ, ಕಾರ್ಯನಿರ್ವಹಿಸಿರುವ ಬಗ್ಗೆ ಅನುಮಾನಗಳಿಲ್ಲ.

ಉತ್ತರ ಕನ್ನಡ ಜಿಲ್ಲೆ ರಾಮಕ್ಷತ್ರಿಯ ಮನೆಯಲ್ಲಿ ಕೊಂಕಣಿ ಮಾತನಾಡಿದರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯರು ಕನ್ನಡ ಹಾಗೂ ತುಳು ಭಾಷೆಯನ್ನು ಮಾತನಾಡುತ್ತಾರೆ. ಇವರನ್ನು ಕೋಟೆಗಾರ, ಶೇಉಗಾರ, ಸೇರ್ವೆಗಾರ ಎಂದು ಹೆಚ್ಚಾಗಿ ಕರೆಯುತ್ತಾರೆ. ಕಾಸರಗೋಡು ಈ ಮೊದಲು ಕರ್ನಾಟಕಕ್ಕೆ ಸೇರಿತ್ತು. ಅಲ್ಲಿ ನೆಲೆಸಿರುವ ಜನರನ್ನು ಹೆಬ್ಬಾಗಿ ಕೋಟೆಗಾರ, ಕೋಟೆಯವರು, ಬೇಕಲ್, ಕೋತ್ಪಾಲ್, ಚೇರೆಕಾರ ಎಂದು ಕರೆಯುತ್ತಾರ. ಇವರು ಕನ್ನಡ, ತುಳು, ಮಳಯಾಳಿ ಭಾಷೆ ಮಾತನಾಡುತ್ತಾರೆ.

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದ ರಾಮಕ್ಷತ್ರಿಯರ ಮೇಲೆ ನಂಬಿಕೆ ಇಟ್ಟ ವಿಜಯನಗರದ ಅರಸರು ಮತ್ತು ಕೆಳದಿ ಅರಸರು ತಾವು ಕಟ್ಟುವ ಕೋಟೆಯ ಕೆಲಸ, ಸಾಮ್ರಾಜ್ಯ ವಿಸ್ತಾರ ಮತ್ತು ಅದರ ಸಂರಕ್ಷಣೆಗೆ ರಾಮಕ್ಷತ್ರಿಯರನ್ನು ನೇಮಿಸಿಕೊಳ್ಳುತ್ತಾರೆ. ಈ ಎರಡೂ ಅರಸು ಮನೆತನಗಳು ಅವನತಿ ಕಂಡ ಬಳಿಕ ರಾಮಕ್ಷತ್ರಿಯರು ಕೃಷಿ, ಪಶುಪಾಲನೆ, ಕೂಲ ಮೊದಲಾದ ವೃತ್ತಗಳನ್ನು ಅವಲಂಬಿಸುತ್ತಾರೆ.

ರಾಮಕ್ಷತ್ರಿಯರು ಮೂಲತಃ ಕವಳೆ ಮಠದ ಶಿಷ್ಯವರ್ಗದವರಾಗಿದ್ದು, ಕರ್ನಾಟಕಕ್ಕೆ ವಲಸೆ ಬಂದ ನಂತರ ಕ್ರಿ.ಶ17ನೇ ಶತಮಾನದಲ್ಲಿ ಶೃಂಗೇರಿ ಮಠ ಶಿಷ್ಯರಾಗುತ್ತಾರೆ. ಬ್ರಿಟೀಷರ ಆಡಳಿತಾವಧಿಯ ಕಾಲಾವಧಿಯಲ್ಲಿ ಉತ್ತರ, ದಕ್ಷಿಣಕನ್ನಡ ಪ್ರತ್ಯೇಕಗೊಂಡ ನಂತರ ಆಡಳಿತದ ಅನುಕೂಲದ ದೃಷ್ಠಿಯಿಂದ 1861ರಲ್ಲಿ ಸ್ವರ್ಣವಲ್ಲಿ ಮಠಕ್ಕೂ ಶಿಷ್ಯರಾಗುತ್ತಾರೆ.